ಚತುಃಸ್ವಾತಂತ್ರ್ಯಗಳು

ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷರಾಗಿದ್ದ ಫ್ರಾಂಕ್‍ಲಿನ್ ಡಿ. ರೂಸ್ವೆಲ್ಟರು ಎರಡನೆಯ ಮಹಾಯುದ್ಧದ ಸಮಯದಲ್ಲಿ 1941ರ ಜನವರಿ 6ರಂದು, ತಮ್ಮ ದೇಶದ ಕಾಂಗ್ರೆಸಿಗೆ ಕಳುಹಿಸಿದ ವಾರ್ಷಿಕ ಸಂದೇಶದಲ್ಲಿ ಪ್ರತಿಪಾದಿಸಿದ ಸ್ವಾತಂತ್ರ್ಯಗಳು. ಶತ್ರುಗಳ ಆಕ್ರಮಣಗಳಿಗೆ ಒಳಗಾಗಿದ್ದ ಗ್ರೇಟ್ ಬ್ರಿಟನ್ ಮತ್ತು ಚೀನಗಳಿಗೆ ಸಹಾಯ ಮಾಡುವ ಆವಶ್ಯಕತೆಯನ್ನು ಒತ್ತಿ ಹೇಳುವುದೇ ಇದರ ತತ್‍ಕ್ಷಣದ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ರೂಸ್ವೆಲ್ಟರು ಪ್ರಥಮತಃ ತಮ್ಮ ದೇಶದ ಜನರ, ಅಂತಿಮವಾಗಿ ಇಡೀ ವಿಶ್ವದ ಜನರ ಗುರಿಯಾಗಿ ನಾಲ್ಕು ಮೂಲ ಮಾನವೀಯ ಸ್ವಾತಂತ್ರ್ಯಗಳನ್ನು ಆಧರಿಸಿದ ಒಂದು ಸುಭದ್ರ ವ್ಯವಸ್ಥೆಯನ್ನು ರೂಪಿಸಿದರು. ಅವರು ನೀಡಿದ ಸ್ವಾತಂತ್ರ್ಯದ ಪರಿಕಲ್ಪನೆ ಸಮಗ್ರವೂ ಪ್ರೌಢವೂ ಆದ್ದು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ದಾರಿದ್ರ್ಯದಿಂದ ಸ್ವಾತಂತ್ರ್ಯ (ವಿಮೋಚನೆ) ಮತ್ತು ಭಯದಿಂದ ಸ್ವಾತಂತ್ರ್ಯ (ವಿಮೋಚನೆ)-ಈ ಸ್ವಾತಂತ್ರ್ಯಗಳು ವ್ಯಕ್ತಿಗಳಿಗಷ್ಟೇ ಅಲ್ಲದೆ ರಾಷ್ಟ್ರಗಳಿಗೂ ಅನ್ವಯಿಸತಕ್ಕದ್ದೆಂದು ಅವರು ಬಯಸಿದರು. ರಾಷ್ಟ್ರಗಳು ಸ್ವತಂತ್ರ್ಯವೂ ಸಮೃದ್ಧಿವೂ ಆಗಿರುವುದಷ್ಟೇ ಅಲ್ಲದೆ ವಿಶ್ವವ್ಯಾಪಿಯಾದ ನಿಶ್ಯಸ್ತ್ರೀಕರಣದ ಮೂಲಕ ಆಕ್ರಮಣಭಯ ರಹಿತವಾಗಿರುವ ದಿನವನ್ನು ನೋಡಲು ಅವರು ಕಾತುರರಾಗಿದ್ದರು. ಪ್ರಪಂಚದ ಯಾವ ಮೂಲೆಯಲ್ಲೇ ಆಗಲಿ, ಯಾವ ರಾಷ್ಟ್ರವೇ ಆಗಲಿ ತನ್ನ ನೆರೆರಾಜ್ಯದ ಮೇಲೆ ಆಕ್ರಮಣ ನಡೆಸಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಏರ್ಪಡಬೇಕೆಂಬುದು ಅವರ ಹಂಬಲವಾಗಿತ್ತು. ಎರಡನೆಯ ಮಹಾಯುದ್ಧ 1945ರಲ್ಲಿ ಕೊನೆಗೊಂಡಿತು. ಅನಂತರ ಅನೇಕ ಅಧೀನ ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿದುವಾದರೂ ರೂಸ್ವೆಲ್ಟರ ಕನಸು ಇನ್ನೂ ಪೂರ್ತಿ ನನಸಾಗಿಲ್ಲ. 
											(ಎಂ.ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ